ರಾಜಪ್ರಭುತ್ವ
ವಂಶಾನುಗತವಾಗಿ ಅಥವಾ ಪ್ರಜೆಗಳಿಂದ ಆಯ್ಕೆಯಾಗಿ ಆಜೀವಪರ್ಯಂತ ಒಬ್ಬ ವ್ಯಕ್ತಿ ರಾಜ್ಯವನ್ನಾಳುವ ಒಂದು ರಾಜ್ಯಾಡಳಿತ ಪದ್ದತಿ (ಮೊನಾರ್ಕಿ). ರಾಜ್ಯ ಒಂದು ಗೊತ್ತಾದ ಎಲ್ಲೆಯಲ್ಲಿರುವ ಭೂವಿಭಾಗ, ಆ ರಾಜ್ಯವನ್ನಾಳುವವನು ರಾಜ. ಈ ಪ್ರಪಂಚದ ಎಲ್ಲ ಭೂಭಾಗಗಳು ಹಿಂದೆ ರಾಜರ ಆಡಳಿತಕ್ಕೆ ಸೇರಿದ್ದು ರಾಜಪ್ರಭುತ್ವ ಪುರಾತನ ಆಡಳಿತಕ್ರಮವಾಗಿತ್ತು. ಅರಿಸ್ಟಾಟಲ್ ಆಡಳಿತ ಕರವನ್ನು ಏಕವ್ಯಕ್ತಿಯ, ಕೆಲವು ಮಂದಿಯ ಮತ್ತು ಬಹುಜನರ ಆಡಳಿತವೆಂದು ವಿಂಗಡಿಸಿದ್ದಾನೆ. ಇವು ಅನುಕ್ರಮವಾಗಿ ರಾಜಪ್ರಭುತ್ವ, ಶ್ರೀಮಂತಪ್ರಭುತ್ವ, ಮತ್ತು ಪ್ರಜಾಪ್ರಭುತ್ವಕಕ್ಕೆ ಹೊಂದಿಕೆಯಾಗುತ್ತವೆ. ದೊರೆ, ಚಕ್ರವರ್ತಿ ಸುಲ್ತಾನ ಮುಂತಾದ ಹೆಸರುಗಳಿಂದಲೂ ರಾಜನನ್ನು ಗುರುತಿಸುತ್ತಾರೆ. ರಾಜಪ್ರಭುತ್ವ ಹಿಂದಿನ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿದ್ದು ಸಮಾಜದ ಐಕ್ಯ ಮತ್ತು ಭದ್ರತೆಗೆ ಅನುಕೂಲವಾಗಿತ್ತು. ರಾಜಪ್ರಭುತ್ವವನ್ನು ಸಂವಿಧಾನಬದ್ಧ ಮತ್ತು ನಿರಂಕುಶ ರಾಜಪ್ರಭುತ್ವ ಚುನಾಯಿತ ಮತ್ತು ಅನುವಂಶಿಕ ರಾಜಪ್ರಭುತ್ವವೆಂದು ವಿಂಗಡಿಸಬಹುದು. ಅನುವಂಶಿಕ ರಾಜಪ್ರಭುತ್ವ ಸಾಧಾರಣವಾಗಿ ಪರಂಪರಾನುಗತ ಆಡಳಿತ ಕ್ರಮವಾಗಿದ್ದರೂ ಚುನಾಯಿತ ರಾಜರಿದ್ದರು. ಪವಿತ್ರ ರೋಮನ್ ಸಾಮ್ರಾಜ್ಯದಲ್ಲಿ ಚಕ್ರವರ್ತಿಗಳನ್ನು ಜರ್ಮನ್ ಶ್ರೀಮಂತರೇ ಚುನಾಯಿಸುತ್ತಿದ್ದರು. ಪೋಲಿಷ್ ರಾಜರನ್ನು ಚುನಾವಣೆಯಿಂದಲೇ ನೇಮಿಸುತ್ತಿದ್ದರು. ಪ್ರಾಚೀನ ಭಾರತದಲ್ಲಿ ರಾಜ ನಿರಂಕುಶನಾದರೆ ಪ್ರಜೆಗಳಿಗೆ ಬೇರೆ ರಾಜನನ್ನು ಚುನಾಯಿಸಲು ಅವಕಾಶವಿತ್ತು. ನಿರಂಕುಶ ರಾಜಪ್ರಭುತ್ವದಲ್ಲಿ ರಾಜನೇ ಕಾನೂನನ್ನು ಮಾಡಿ, ಅದನ್ನು ಜಾರಿಗೆ ತರಲು ಸರ್ವಾಧಿಕಾರವನ್ನು ಹೊಂದಿರುತ್ತಿದ್ದ. ಆ ಕಾನೂನಿನ ಅರ್ಥವಿವರಣೆ ಮಾಡುವ ಹಕ್ಕು ಅವನಿಗೆ ಸೇರಿತ್ತು. ಅವನ ನಿರ್ಧಾರವೇ ಅಂತಿಮವಾಗಿತ್ತು. ಪ್ರಪಂಚದ ಇತಿಹಾಸದಲ್ಲಿ ನಿರಂಕುಶ ರಾಜಪ್ರಭುತ್ವಗಳ ಅನೇಕ ನಿದರ್ಶನಗಳಿವೆ. ಫ್ರಾನ್ಸ್ ದೇಶದ ಹದಿನಾಲ್ಕನೆಯ ಲೂಯಿಯ ನಿರಂಕುಶ ರಾಜಪ್ರಭುತ್ವ ಮುಖ್ಯವಾದದು. `ನಾನೇ ರಾಷ್ಟ್ರ ಎಂದು ಘೋಷಿಸಿರುವುದು ಇದರ ಮುಖ್ಯ ಅಂಶ. ಹಾಬ್ಸ್ 17ನೆಯ ಶತಮಾನದಲ್ಲಿ ರಾಜನಿಷ್ಠೆಗೆ ನಿರಂಕುಶ ರಾಜಪ್ರಭುತ್ವವೇ ಮುಖ್ಯ ಆಧಾರ ಎಂದು ಹೇಳಿದ್ದಾನೆ. ಅವನ ಅಭಿಪ್ರಾಯದ ಪ್ರಕಾರ ರಾಜನ ಖಾಸಗಿ ಹಿತಾರ್ಥಗಳು ಪ್ರಜೆಗಳ ಹಿತಾರ್ಥಗಳನ್ನೇ ಅವಲಂಬಿಸಿದೆ. ರಾಜ ಎಲ್ಲರಿಂದಲೂ ಸಲಹೆಯನ್ನು ಪಡೆಯಬಹುದು. ಆ ಸಲಹೆಯನ್ನು ಗುಟ್ಟಾಗಿ ಇಟ್ಟುಕೊಳ್ಳಬಹುದು. ಒಂದು ಸಭೆಯಲ್ಲಿ ಒಂದು ನಿರ್ಣಯಕ್ಕೆ ಬರುವುದು ಕಷ್ಟವಾದರೂ ನಿರಂಕುಶ ರಾಜ ಮನಸ್ಸು ಮಾಡಿದರೆ ಒಂದು ನಿರ್ಣಯಕ್ಕೆ ಬರಲು ಯಾವ ಅಡ್ಡಿಯೂ ಇಲ್ಲ. ನಿರಂಕುಶ ಪ್ರಭುತ್ವದಲ್ಲಿ ದೇವಪ್ರಭುತ್ವವನ್ನು ಕಾಣಬಹುದು. ದೇವಪ್ರಭುತ್ವದಲ್ಲಿ ರಾಜನೇ ದೇವರ ಪ್ರತಿನಿಧಿಯೆಂದೂ ಮತ್ತು ಸ್ವೇಚ್ಛೆಯಾಗಿ ಆಡಳಿತ ನಡೆಸಲು ಅವನಿಗೆ ಅಧಿಕಾರವಿದೆ. --ಎಂಬುದೂ ಪ್ರಮುಖ ಅಂಶಗಳು. ರಾಜ ದೇವರಿಗೆ ಸಮಾನನಾದ್ದರಿಂದ ಅವನ ನಿರ್ಧಾರವೇ ಅಂತಿಮ ತೀರ್ಮಾನ. ಇತಿಹಾಸದಲ್ಲಿ ಅನೇಕ ದೇವಪ್ರಭುತ್ವಗಳನ್ನು ನೋಡಬಹುದು. ಯೆಹೂದ್ಯರು ದೇವರೇ ರಾಜನ ಮೂಲಕ ಆಳುತ್ತಾನೆಂದು ತಿಳಿದಿದ್ದರು. ಅನೇಕ ಇಸ್ಲಾಮ್ ರಾಜ್ಯಗಳಲ್ಲಿ ಖುರಾನ ಗ್ರಂಥದ ಆಧಾರದ ಮೇಲೆ ದೇವ ಪ್ರಭುತ್ವಗಳು ಸ್ಥಾಪಿಸಿಲ್ಟಟ್ಟಿವೆ. ಆದರೆ ಈಚೆಗೆ ನಿರಂಕುಶ ರಾಜಪ್ರಭುತ್ವಗಳು ಬಹುಮಟ್ಟಿಗೆ ಸಂವಿಧಾನಬದ್ಧ ರಾಜಪ್ರಭುತ್ವಗಳಾಗಿ ಪರಿವರ್ತಿತವಾಗಿವೆ. ಸಾಂಕುಶ ರಾಜಪ್ರಭುತ್ವ ರಾಜ್ಯಾಂಗಕ್ಕೆ ಅಧೀನ. ಕೆಲವು ಸಂದರ್ಭಗಳಲ್ಲಿ ಪ್ರಜೆಗಳೇ ರಾಜನ ನಿರಂಕುಶ ಆಡಳಿತಕ್ಕೆ ವಿರೋಧವಾಗಿ ದಂಗೆ ಎದ್ದು ರಾಜನಿಂದ ಬಲವಂತವಾಗಿ ಹಕ್ಕುಬಾಧ್ಯತೆಗಳನ್ನು ಕಿತ್ತಿಕೊಳ್ಳುವುದುಂಟು. 1640ರಲ್ಲಿ ಇಂಗ್ಲೆಂಡಿನ ಸಂಸತ್ತು ಬಲವಾಗಿ ಒಂದನೆಯ ಚಾಲ್ರ್ಸ್‍ನನ್ನು ಮರಣದಂಡನೆಗೆ ಗುರಿಮಾಡಿತು. ಹಾಗೆಯೇ ಇಂಗ್ಲೆಂಡನ್ನು ಆಳಿದ ಸ್ಟ್ಯುಅರ್ಟ್ ದೊರೆಗಳು ತಾವು ದೇವತ್ವ ಪಡೆದಿರುವುದರಿಂದ ನಿರಂಕುಶ ಪ್ರಭುತ್ವ ಸ್ಥಾಪಿಸಲು ಅರ್ಹರೆಂದು ಘೋಷಿಸಿದ ಪರಿಣಾಮವಾಗಿ ಪ್ರಜೆಗಳ ದಂಗೆ ತಲೆದೋರಿ ಎರಡನೆಯ ಜೇಮ್ಸ್ ಸಿಂಹಾಸನದಿಂದ ಪದಚ್ಯುತನಾಗಿ ಕ್ರಿ.ಶ. 1688ರಲ್ಲಿ ರಕ್ತಪಾತರಹಿತ ಕ್ರಾಂತಿ ನಡೆದು ಸಾಂಕುಶ ರಾಜಪ್ರಭುತ್ವ ಸ್ಥಾಪಿತವಾಯಿತು. ಸಾಂಕುಶ ರಾಜಪ್ರಭುತ್ವ ಪ್ರಜಾಪ್ರಭುತ್ವವನ್ನು ಬಹುಮಟ್ಟಿಗೆ ಹೋಲುತ್ತದೆ. ಫ್ರೆಂಚ್ ಕ್ರಾಂತಿ 1789ರಲ್ಲಿ 16ನೆಯ ಲೂಯಿಯ ಅಧಿಕಾರವನ್ನು ಮೊಟಕುಗೊಳಿಸಿದ್ದಲ್ಲದೆ 1793ರಲ್ಲಿ ಅವನಿಗೆ ಮರಣದಂಡನೆ ವಿಧಿಸಿತು. ಪ್ರಜಾಪ್ರಭುತ್ವದಲ್ಲಿ ರಾಜನ ಬದಲಾಗಿ ಆಡಳಿತ ಮುಖ್ಯಕಾರ್ಯನಿರ್ವಾಹಕ (ರಾಜ) ನಿರಂತರವಾಗಿ ಇರುವುದು ಅದರ ಮುಖ್ಯ ಲಕ್ಷಣ. ಇಂಗ್ಲೆಂಡಿನಲ್ಲಿ ಮಾತ್ರ ಸಾಂಕುಶ ರಾಜಪ್ರಭುತ್ವ ಅನೇಕ ಶತಮಾನಗಳಿಂದ ಇದೆ. 1688ರ ಕ್ರಾಂತಿಯ ಫಲವಾಗಿ ಇಂಗ್ಲೆಂಡಿನಲ್ಲಿ ರಾಜಕೀಯ ಸ್ಥಿತಿ ಕ್ರಮಬದ್ಧವಾಯಿತು. ಬ್ರಿಟಿಷರು ಪಾರ್ಲಿಮೆಂಟರಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದರೂ ರಾಜತ್ವವನ್ನು ತೆಗೆದುಹಾಕಲಿಲ್ಲ. ಭಾರತದ ಅನೇಕ ರಾಜರೂ ತಮ್ಮ ಆಡಳಿತಕ್ಕೆ ಹಾಗೂ ಸುಧಾರಣೆಗೆ ಪ್ರಸಿದ್ಧರಾಗಿದ್ದರು. ಭಾರತದಲ್ಲಿ ಸ್ವಾತಂತ್ರ್ಯ ಪಡೆಯುವ ತನಕ ಅಲ್ಲಿಯ ಕೆಲವು ರಾಜ್ಯಗಳಲ್ಲಿ ರಾಜಪ್ರಭುತ್ವವಿತ್ತು. ಒಟ್ಟಿನಲ್ಲಿ ಹಿಂದೆ ಪ್ರಜೆಗಳಿಗೆ ರಕ್ಷಣೆಯಾಗಿ ದೇಶದ ಆಡಳಿತ ನಡೆಸಿದ ರಾಜಪ್ರಭುತ್ವ ಇಂದು ತನ್ನ ಸ್ಥಾನವನ್ನು ಕಳೆದುಕೊಂಡು ಪ್ರಜಾಪ್ರಭುತ್ವಕ್ಕೆ ಎಡೆ ಮಾಡಿದೆ.							
(ಬಿ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ